|
ಆವನಿ ಶೃಂಗೇರಿ ಶ್ರೀ ಶಾರದಾ ಪೀಠ
ಈ ಕ್ಷೇತ್ರದಲ್ಲಿ ರುದ್ರಭಟ್ಟಾರಕರು ಅಹವನೀಯ ಯಾಗ ಮಾಡಿದ ಕಾರಣ ಈ ಕ್ಷೇತ್ರ ಆಹವನೀಯವಾಯಿತು. ಇಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮವಿತ್ತು. ರಾಮನಿಂದ ಪರಿತ್ಯಕ್ತಳಾದ ಸೀತಾದೇವಿ ಇಲ್ಲಿ ಬಂದ ನೆಲೆಸಿ, ಲವನಿಗೆ ಜನ್ಮವಿತ್ತಳಂತೆ. ಕುಶನ ಸೃಷ್ಟಿಯಾದದ್ದೂ ಇಲ್ಲಿಯೇ. ಶ್ರೀರಾಮಚಂದ್ರ ಪಾಪ ಪ್ರಾಯಶ್ಚಿತ್ತಾರ್ಥ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಈ ಕ್ಷೇತ್ರದ ಬೆಟ್ಟದ ಮೇಲೆ ಸೀತಾ ಮಾತೆ, ವಾಲ್ಮೀಕಿ ಮಹರ್ಷಿಗಳ ಆಣತಿಯಂತೆ ಸ್ವರ್ಣಗೌರಿ ವ್ರತವನ್ನಾಚರಿಸಿದ್ದಳಂತೆ. ಆಗ ಪಾರ್ವತಿ ಇಲ್ಲಿ ಸೀತಾದೇವಿಗೆ ದರ್ಶನವಿತ್ತು ಹರಸಿದಳು. ಹೀಗಾಗಿ ಈ ಬೆಟ್ಟ ಪಾರ್ವತಿ ಬೆಟ್ಟವೆಂದೇ ಕರೆಸಿಕೊಂಡಿತ್ತು. ಇಷ್ಟೆಲ್ಲಾ ಮಹಿಮಾನ್ವಿತವಾದ ಈ ಕ್ಷೇತ್ರದಲ್ಲಿ ಶ್ರೀಶ್ರೀ ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀ ಶಾರದಾಪೀಠವಿದೆ. ಸನಾತನ ಧರ್ಮವನ್ನು ಪುನಶ್ಚೇತನಗೊಳಿಸಿದ ಶಂಕರ ಭಗವತ್ಪಾದರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಚತುರಾಮ್ನಾಯ ಪೀಠಗಳ ಪೈಕಿ ಒಂದಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 12ನೇ ಪೀಠಸ್ಥ ಆಚಾರ್ಯರಾಗಿದ್ದ ಜಗದ್ಗುರು ಶ್ರೀ ನೃಸಿಂಹ ಭಾರತೀ ಸ್ವಾಮೀಜಿಯವರು ಧರ್ಮ ಪ್ರಚಾರ ಉದ್ದೇಶದಿಂದ ತೀರ್ಥಯಾತ್ರೆ ಕೈಗೊಂಡಾಗ, ಕೋಲಾಹಲಪುರ ಇಂದಿನ ಕೋಲಾರದ ಬಳಿ ತಾಯಿ ಶಾರದಾ ಮಾತೆಯ ಆದೇಶದಂತೆ ಧರ್ಮಪೀಠ ಸ್ಥಾಪಿಸಿದರು. ಅವರ ನಂತರ ಸಿದ್ಧ ಪುರುಷರು ಆವಿರ್ಭಾವಗೊಂಡು ಆ ಜ್ಞಾನಪೀಠದ ಪರಂಪರೆಯನ್ನು ಮುಂದುವರಿಸಿದರು. ಸ್ವತಂತ್ರ ಪೀಠವಾಗಿ ಅಂದಿನಿಂದ ಇಂದಿನವರೆಗೂ ಜಗದ್ಗುರುಗಳ ಸಂಸ್ಥಾನದಲ್ಲಿ 21 ಆಚಾರ್ಯರು ವಿರಾಜಮಾನರಾಗಿದ್ದಾರೆ. ಕೋಲಾಹಲ ಪುರದಲ್ಲಿ ಸ್ಥಳ ಮಹಿಮೆಯಿಂದ ಆಗಿದ್ದಾಗ್ಗೆ ತಪೋಭಂಗವಾಗುತ್ತಿದ್ದ ಕಾರಣ ಮಹಿಮಾನ್ವಿತವಾದ ಆವನಿಗೆ ಪೀಠವನ್ನು 500 ವರ್ಷಗಳ ಹಿಂದೆ ಅಂದಿನ ಪೀಠಾಧ್ಯಕ್ಷರು ವರ್ಗಾಯಿಸಿದರು ಎಂದು ತಿಳಿದುಬರುತ್ತದೆ. ಅಂದಿನಿಂದ ಶ್ರೀಮಠವು ಶತಶೃಂಗ ಪರ್ವತ ಸನ್ನಿಹಿತ ಕೋಲಾಹಲಪುರೀ ಪೀಠವಾಗಿ ಧರ್ಮ ಪ್ರಚಾರ ಮಾಡುತ್ತಾ ಬಂದಿದೆ. ಸಂಸ್ಥಾನದ 21ನೇ ಜಗದ್ಗುರುಗಳಾದ ಶ್ರೀ ಅಭಿನವೋದ್ದಂಡ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರು ತಮ್ಮ 16ನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ಪೀಠದ ಮಹತ್ವವನ್ನು ತಿಳಿಸಿದ ದೇಶದ ಉದ್ದಗಲ ಸಂಚರಿಸಿ ಧರ್ಮ ಪ್ರಚಾರ ಮಾಡಿದ ಸಂದರ್ಭದಲ್ಲಿ ರಾಜ ಮಹಾರಾಜರು ನೀಡಿದ ಕಾಣಿಕೆಗಳಿಂದ ಮಠವನ್ನು ಅಭಿವೃದ್ಧಿ ಪಡಿಸಿದರು.
ಶ್ರೀಮಠದಲ್ಲಿ ಶ್ರೀಚಂದ್ರಮೌಳೀಶ್ವರರು ಕಾಲತ್ರಯದಲ್ಲಿ ಆರಾಧಿಸಲ್ಪಡುವ ಸ್ಫಟಿಕಲಿಂಗವೂ ಇದೆ. ಸುಂದರವಾದ ಪರಿಸರದಲ್ಲಿರುವ ಮಠಕ್ಕೆ ಭೇಟಿ ನೀಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. | |||