ಮುಖಪುಟ /ನಮ್ಮದೇವಾಲಯಗಳು   

ಆವನಿಯ ಶ್ರೀರಾಮಲಿಂಗೇಶ್ವರ ದೇವಾಲಯ

Avani Ramalingeswara temple, ಆವನಿ ರಾಮಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿ ಇರುವ ಆವನಿ ಶ್ರೀರಾಮಲಿಂಗೇಶ್ವರನ ನೆಲೆವೀಡು. ಇಲ್ಲಿ ಶ್ರೀರಾಮಚಂದ್ರನೇ ಸ್ವತಃ ಪ್ರತಿಷ್ಠಾಪಿಸಿ, ಪೂಜಿಸಿದ ಬೃಹತ್ ರಾಮೇಶ್ವರ ಲಿಂಗವಿದೆ.  ಶ್ರೀರಾಮ ಲಿಂಗ ಪ್ರತಿಷ್ಠಾಪಿಸಿದ ಬಗ್ಗೆ ಒಂದು ಕಥೆ ಇದೆ.

ಐತಿಹ್ಯ: ರಾಮಾಯಣ ಮಹಾಕಾವ್ಯದ ರೀತ್ಯ ಈ ಪ್ರದೇಶ ಆವಂತಿಕಾ ಕ್ಷೇತ್ರವಾಗಿತ್ತು. ಇಲ್ಲಿ ವಾಲ್ಮೀಕಿ ಮಹರ್ಷಿಗಳು ಆಶ್ರಮ ನಿರ್ಮಿಸಿ, ತಪವನ್ನಾಚರಿಸುತ್ತಿದ್ದರು. ರಾಮನಿಂದ ಪರಿತ್ಯಕ್ತೆಯಾದ ಸೀತಾಮಾತೆ ಇಲ್ಲಿ ಬಂದು ವಾಲ್ಮೀಕಿ ಮಹರ್ಷಿಗಳ ಆಶ್ರಯ ಪಡೆದರು. ಗರ್ಭಿಣಿಯಾಗಿದ್ದ ಸೀತಾಮಾತೆ ಲವನಿಗೆ ಜನ್ಮನೀಡಿದಳು. ಒಮ್ಮೆ ಲವ ಕಾಣದೇ ಇದ್ದಾಗ, ಕುಶ ಅಂದರೆ ದರ್ಭೆಯಿಂದ ಲವನ ಪ್ರತಿರೂಪ ಸೃಷ್ಟಿಸಿದಳಂತೆ. ಅವನೇ ಕುಶ. ಈ ಇಬ್ಬರು ಅವಳಿ ಸೋದರರು ಶ್ರೀರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದರಂತೆ. ಅಶ್ವರಕ್ಷಣೆಗೆ ಬಂದ ಎಲ್ಲರೂ ಲವಕುಶರೊಂದಿಗೆ ಯುದ್ಧಮಾಡಿ ಸೋತಾಗ, ಸ್ವತಃ ಶ್ರೀರಾಮನೇ ಯುದ್ಧಕ್ಕೆ ಬರುತ್ತಾನೆ. ವಾಲ್ಮೀಕಿ ಮಹರ್ಷಿಗಳ ಆಶ್ರಮ ಪ್ರವೇಶಿಸಿ ಅವರೊಂದಿಗೆ ಏಕಾಂತದಲ್ಲಿ ಮಾತನಾಡಿ, ನಿಜ ವೃತ್ತಾಂತ ತಿಳಿದಾಗ ಮತ್ತೆ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಲೆತ್ನಿಸಿದಾಗ, ಭೂಮಿಯ ಮಗಳಾದ ಸೀತೆಯನ್ನು ಭೂಮಿತಾಯಿ (ಭೂಮಿ ಇಬ್ಭಾಗವಾಗಿ) ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಾಳೆ.

ಆಗ ಶ್ರೀರಾಮಚಂದ್ರ ತನ್ನ ತಪ್ಪಿನ ಪ್ರಾಯಶ್ಚಿತ್ತಾರ್ಥವಾಗಿ ಇಲ್ಲಿ ಬೃಹತ್ ಲಿಂಗ ಸ್ಥಾಪಿಸಿ, ಪೂಜಿಸುತ್ತಾನೆ. ಅದುವೇ ರಾಮೇಶ್ವರಲಿಂಗ. ನಂತರ ಭರತ, ಶತೃಘ್ನ, ಲಕ್ಷ್ಮಣ, ಸುಗ್ರೀವ ಸೇರಿದಂತೆ ಶ್ರೀರಾಮ ಪರಿವಾರದವರು ಇಲ್ಲಿ 108 ಲಿಂಗ ಪ್ರತಿಷ್ಠಾಪಿಸಿದರಂತೆ.

ಈ ಘಟನೆಗಳಿಗೆ ಸಂಬಂಧಪಟ್ಟಂತೆ, ಈ ಪ್ರದೇಶದಲ್ಲಿ ಅನೇಕ ತಾಣಗಳಾದ ವಾಲ್ಮೀಕಿಯ ಕುಟೀರ, ವಾಲ್ಮಿಕಿಯೊಂದಿಗೆ ಶ್ರೀರಾಮ ಏಕಾಂತದಲ್ಲಿ ಮಾತನಾಡಿದ ಸ್ಥಳದಲ್ಲಿ ಏಕಾಂತರಾಮಸ್ವಾಮಿ ಸನ್ನಿಧಿ, ಸೀತೆಯ ಬಾಯಾರಿಕೆ ತೀರಿಸಲು ಲಕ್ಷ್ಮಣ ಧನುಸ್ಸಿಗೆ ಬಾಣ ಹೂಡಿ ತರಿಸಿದ ಜಲ ಇರುವ ಧನುಷ್ಕೋಟಿ, ಲವಕುಶರು ಮಲಗುತ್ತಿದ್ದ ತೊಟ್ಟಿಲು, ಸೀತೆಯು ಬಳಸಿದ ಅಡುಗೆಪಾತ್ರೆ, ಸ್ನಾನ ಮಾಡುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ ಇಲ್ಲಿವೆ.

ಇಂಥ ಪವಿತ್ರ ಸ್ಥಳದಲ್ಲಿ ಇರುವ ರಾಮೇಶ್ವರ ದೇವಾಲಯ ಅತ್ಯಂತ ಪ್ರಾಚೀನವಾದ್ದು. ದೇವಾಲಯಕ್ಕೆ ದ್ರಾವಿಡಶೈಲಿಯ ಸುಂದರ ಗೋಪುರವಿದೆ. ಈ ದೇವಾಲಯ

ವಿಶಾಲವಾದ ಪ್ರಾಕಾರವಿರುವ ಈ ದೇವಾಲಯ  ಮಧ್ಯದಲ್ಲಿ ಪಾರ್ವತೀ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ಸುಗ್ರೀವೇಶ್ವರ ಗುಡಿಗಳಿವೆ. ಇವುಗಳ ಪೈಕಿ ಲಕ್ಷ್ಮಣೇಶ್ವರ ಗುಡಿ ಕಲಾತ್ಮಕತೆಯ ದೃಷ್ಟಿಯಿಂದ ಅತ್ಯಂತ ಸುಂದರ.   ಗರ್ಭಗೃಹ, ಅಂತರಾಳ ಮತ್ತು ನವರಂಗದಿಂದ ಕೂಡಿದ ಈ ದೇವಾಲಯದ ಹೊರ ಭಿತ್ತಿಗಳ ಪಟ್ಟಿಕೆಗಳಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳೇ ಮೊದಲಾದ ಶಿಲ್ಪಾಂಕರಣಗಳಿವೆ.

ಮೇಲಿನ ದೊಡ್ಡ ಪಟ್ಟಿಕೆಗಳಲ್ಲಿ ಯಕ್ಷ, ಶಿವ, ದುರ್ಗಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿವೆ. ಮಧ್ಯೆ ಮಧ್ಯೆ ಸುಂದರವಾದ ಅರೆಗಂಬಗಳ ಉಬ್ಬುಶಿಲ್ಪಗಳಿವೆ. ಇದರ ಮಧ್ಯೆ ಮಧ್ಯೆ ಮಹಿಷಾಸುರಮರ್ದಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಿಸಿವೆ.

ದೇವಾಲಯದ ಒಳಗಿರುವ ಭುವನೇಶ್ವರಿಯಲ್ಲಿ ಮಧ್ಯೆ ಉಮಾಮಹೇಶ್ವರ ಉಬ್ಬುಶಿಲ್ಪವಿದ್ದು, ಅದರ ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿದೆ. ಈ ದೇವಾಲಯವನ್ನು ಕ್ರಿಸ್ತ ಶಕ 10ನೆ ಶತಮಾನದಲ್ಲಿ ಕಟ್ಟಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ನಂತರ ದೇವಾಲಯ ವಿಜಯನಗರದರಸರ, ನೊಳಂಬರ, ಗಂಗರ ಕಾಲದಲ್ಲಿ ದೇವಾಲಯ ಅಭಿವೃದ್ಧಿಹೊಂದಿದೆ.

ಮುಳುಬಾಗಿಲನಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಹೋಗಲು ಬೆಂಗಳೂರು, ಕೋಲಾರ, ಮುಳಬಾಗಿಲಿನಿಂದ ನೇರ ಬಸ್ ಸೌಕರ್ಯವಿದೆ.

 ಮುಖಪುಟ /ನಮ್ಮದೇವಾಲಯಗಳು