|
ಮಹಾಲಕ್ಷ್ಮೀ ಲೇಔಟ್
ಗುರುವಾಯೂರಪ್ಪನ್
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ತನ್ನ ಹೆಸರಿನಲ್ಲೇ ಧನದೇವತೆಯನ್ನು ಒಳಗೊಂಡ ನಗರದ ಪ್ರತಿಷ್ಠಿತ ಬಡಾವಣೆ. ಈ ಬಡಾವಣೆಯಲ್ಲಿ ಮಹಾಲಕ್ಷ್ಮೀ, ಆಂಜನೇಯ, ವೆಂಕಟರಮಣ, ದೇವಾಲಯವಿದೆ. ಇಸ್ಕಾನ್ ಕೃಷ್ಣ ದೇವಾಲಯ ಇರುವುದೂ ಇಲ್ಲೆ. ಈ ಪವಿತ್ರ ತಾಣದಲ್ಲಿ ಇಸ್ಕಾನ್ ದೇಗುಲದ ಎದುರು ಗುರುವಾಯುರಪ್ಪ ಹಾಗೂ ಅಷ್ಟಲಕ್ಷ್ಮೀ ದೇವಾಲಯವೂ ಇದೆ. ಈ ದೇವಾಲಯ ನಿರ್ಮಾಣದ ಹಿಂದೆ ಒಂದು ದೊಡ್ಡ ಸಾಧನೆಯೇ ಇದೆ. ಮೇಲುಕೋಟೆಯಿಂದ ಬೆಂಗಳೂರಿಗೆ ಬಂದು ಟಾಟಾ ಇನ್ಸ್ ಟಿಟ್ಯೂಟ್ ನಲ್ಲಿ ಕೆಲಸಕ್ಕೆ ಸೇರಿ, ಬೆಂಗಳೂರಿನಲ್ಲೇ ನೆಲೆಸಿದ ಶ್ರೀ.ಎಂ.ಕೆ.ವಿ. ಆಚಾರ್ಯರು, ತಮ್ಮ ನಿವಾಸದಲ್ಲೇ ಆಚಾರ್ಯ ಮೆಮೋರಿಯಲ್ ಹಾಲ್ ನಿರ್ಮಿಸಿ, ಶ್ರೀ ವೈಷ್ಣವ ಸಂಪ್ರದಾಯ ಸಿದ್ಧಾಂತದಲ್ಲಿ ಪರಿಣತಿ ಪಡೆದ ಉಭಯ ವೇದಾಂತ ವಿದ್ವಾಂಸರನ್ನು ಕರೆಸಿ ಆಗಾಗ್ಗೆ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಭಗವಂತನ ಮಹಿಮೆಯನ್ನು ಎಲ್ಲರಿಗೂ ತಿಳಿಸಿಕೊಡುತ್ತಿದ್ದರು. ಮುಕ್ತಿಯ ಮಾರ್ಗಕ್ಕೆ ಭಗವಂತನಿಗೆ ಶರಣು ಹೋಗುವುದೇ ಮಾರ್ಗ ಎಂಬುದನ್ನು ಮನವರಿಕೆ ಮಾಡಿಸುತ್ತಿದ್ದರು.
ಮಹಾಲಕ್ಷ್ಮೀ ಬಡಾವಣೆಯಲ್ಲಿ ಅಷ್ಟ ಲಕ್ಷ್ಮಿಯರನ್ನು ಪ್ರತಿಷ್ಠಾಪಿಸಬೇಕೆಂಬ ಸಂಕಲ್ಪದಿಂದ ಗುರುವಾಯುರ್ ಅಪ್ಪನ್ ದೇವಾಲಯದ ಪ್ರಾಕಾರದಲ್ಲಿಯೇ 10 ಗುಡಿಗಳನ್ನು ನಿರ್ಮಿಸಿ ಅಷ್ಟಲಕ್ಷ್ಮೀ, ರಾಮಾನುಜಾಚಾರ್ಯರು ಹಾಗೂ ಆಂಡಾಳ್ ವಿಗ್ರಹಗಳನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು.
ಪ್ರಧಾನ ಗರ್ಭಗೃಹದ ಬಲ
ಭಾಗದಲ್ಲಿ ಐದು ಹಾಗೂ ಎಡ ಭಾಗದಲ್ಲಿ ಐದು ಪುಟ್ಟ ದೇವಾಲಯಗಳಿದ್ದು, ಮೊದಲ
ಗುಡಿಯಲ್ಲಿ ರಾಮಾನುಜಾಚಾರ್ಯರ ವಿಗ್ರಹವಿದೆ. ನಂತರದ ಗುಡಿಗಳಲ್ಲಿ ಆದಿಲಕ್ಷ್ಮೀ,
ಸಂತಾನಲಕ್ಷ್ಮೀ, ಗಜಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ವಿಜಯಲಕ್ಷ್ಮೀ,
ವಿದ್ಯಾಲಕ್ಷ್ಮೀ, ವೀರಲಕ್ಷ್ಮೀ ಹಾಗೂ ಆಂಡಾಳ್ ವಿಗ್ರಹಗಳಿವೆ.
ದೇವಾಲಯದ ಎದುರು
ವರಮಹಾಲಕ್ಷ್ಮೀ ಹಬ್ಬದ ದಿನ ಹಾಗೂ ದಿಪಾವಳಿ ಲಕ್ಷ್ಮೀ ಪೂಜೆಯ ದಿನ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ದೇವಾಲಯಕ್ಕೆ ಬಂದು ಅಷ್ಟಲಕ್ಷ್ಮಿಯ ದರ್ಶನ ಪಡೆದವರಿಗೆ ಅಷ್ಟೈಶ್ವರ್ಯಗಳೂ ಲಭಿಸುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. | |||