ಮುಖಪುಟ /ನಮ್ಮದೇವಾಲಯಗಳು  

ಅರಸೀಕೆರೆ ಶಿವ ದೇವಾಲಯ

*ಟಿ.ಎಂ. ಸತೀಶ್

Arasikere Sadashiva temple,

ಶಿಲ್ಪಕಲಾ ಶ್ರೀಮಂತಿಕೆಯ ತವರು ಹಾಸನ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಅರಸೀಕೆರೆ. ಹಾಸನದಿಂದ ದಿಂದ 41 ಕಿಲೋ ಮೀಟರ್ ದೂರದಲ್ಲಿರುವ ಈ ಊರು ಶಿವಕ್ಷೇತ್ರವೂ ಹೌದು. ಪೂರ್ವದಲ್ಲಿ  ವಿಜಯನಗರಸಾಮ್ರಾಜ್ಯದ ಒಂದು ಮುಖ್ಯ ಊರಾಗಿದ್ದ ಈ ಸ್ಥಳ ನಂತರ ಮಹಾರಾಷ್ಟ್ರದ ಆಡಳಿತಕ್ಕೆ ಸೇರಿ ಕಡೆಗೆ ಮೈಸೂರಿಗೆ ಸೇರ್ಪಡೆಯಾಯಿತು. 1899ರಲ್ಲಿ ರೈಲ್ವೆ ಸಂಪರ್ಕ ದೊರೆತ ಮೇಲೆ ಈ ಊರು ವಾಣಿಜ್ಯ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದಿತು.

ಹೊಯ್ಸಳರ ದೊರೆ ಸೋಮೇಶ್ವರ ತನ್ನ ಅರಸಿಯ ಹೆಸರಲ್ಲಿ 11ನೇ ಶತಮಾನದಲ್ಲಿ ಇಲ್ಲಿ ಕೆರೆ ಕಟ್ಟಿಸಿದ ಕಾರಣ ಊರಿಗೂ ಅರಸೀಕೆರೆ ಎಂದೇ ಹೆಸರು ಬಂದಿದೆ. ಆ ಕೆರೆಯ ಹತ್ತಿರ ಒಂದು ಕೋಟೆ, ಕೆಲವು ದೇವಸ್ಥಾನ ಮತ್ತು ನಾಗರಕೆರೆ ಎಂಬ ಇನ್ನೊಂದು ಕೆರೆ ಇವೆ.

ಸನಿಹದಲ್ಲೇ ಇರುವ ಈಶ್ವರ ದೇವಸ್ಥಾನ ಹೊಯ್ಸಳ ವಾಸ್ತುಶಿಲ್ಪಕ್ಕೆ ಪ್ರಸಿದ್ದವಾಗಿದೆ. 1220ರಲ್ಲಿ ನಿರ್ಮಾಣವಾದ ಈ ದೇವಾಲಯ ಪೂರ್ವಾಭಿಮುಖವಾಗಿದ್ದು,  ಹೊಯ್ಸಳರ  ವಿಭಿನ್ನ ಹಾಗೂ ಕಲಾತ್ಮಕ ವಾಸ್ತು ವೈಭವಕ್ಕೆ ಸಾಕ್ಷಿಯಾಗಿದೆ. ನಕ್ಷತ್ರಾಕಾರದ ಜಗಲಿಯ ಮೇಲಿರುವ ಈ ದೇವಾಲಯ ವಿಶಾಲವಾದ ನವರಂಗವನ್ನು ಹೊಂದಿದ್ದು ಮೇಲೆ ಬೃಹದಾಕಾರವಾದ ಗೋಪುರವಿದೆ. ಹೊರ ಪಟ್ಟಿಕೆಗಳಲ್ಲಿ ಲತಾ ಸುರಳಿಗಳು, ಕಾಲ್ಪನಿಕ ಮೃಗ, ಆನೆ, ಒಂಟೆ, ಕುದುರೆ ಮೊದಲಾದ ಸುಂದರ ಶಿಲ್ಪಾಲಂಕರಣಗಳಿವೆ.

ಗರ್ಭಗೃಹದ ದ್ವಾರವಂತೂ ಶಿಲ್ಪಕಲೆಯಿಂದ ಕಣ್ಮನಸೆಳೆಯುತ್ತದೆ. ನವರಂಗದಲ್ಲಿ ಸುಂದರ ಹಾಗೂ ಕಲಾತ್ಮಕವಾದ ಭುವನೇಶ್ವರಿಗಳಿವೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಗರ್ಭಗೃಹದ ಹೊರಬಿತ್ತಿಗಳು ನೂರಾರು ಸುಂದರ ಶಿಲಾಮೂರ್ತಿಗಳಿಂದ ಕೂಡಿವೆ.

ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862.

ಮುಖಪುಟ /ನಮ್ಮದೇವಾಲಯಗಳು