|
ಹನುಮಂತನಗರದ ಆನಂದ ಮಿಲನಾದ್ರಿ *ಟಿ.ಎಂ.ಸತೀಶ್
ಬಹಳ ಹಿಂದೆ ಈ ಜಾಗ ಬೆಟ್ಟಗುಡ್ಡಗಳಿಂದ ಕೂಡಿತ್ತು. ಗಿಡ, ಮರಗಳು ಬೆಳೆದ ದಟ್ಟ ಕಾಡಿನಂತಿತ್ತು. ಇಲ್ಲಿ ಋಷಿ ಮುನಿಗಳು ತಪವನ್ನಾಚರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಗೌತಮ ಮಹರ್ಷಿಗಳು ಶ್ರೀರಾಮಭಕ್ತ ಆಂಜನೇಯನ ಕುರಿತು ತಪವನ್ನಾಚರಿಸಿ, ಪ್ರಾಣದೇವರ ಪ್ರತಿಷ್ಠೆ ಮಾಡಿದರೆಂಬುದು ಪ್ರತೀತಿ. ನಂತರ ಗವಿಪುರ ಹಾಗೂ ಸುಂಕೇನಹಳ್ಳಿಯ ಜನತೆ ಇಲ್ಲಿ ಪುಟ್ಟದೊಂದು ಮಣ್ಣಿನ ಗುಡಿ ಕಟ್ಟಿ, ಒಂದೂವರೆ ಅಡಿ ಎತ್ತರದ ಹನುಂತನ ವಿಗ್ರಹ ಇಟ್ಟು ಪೂಜಿಸುತ್ತಿದ್ದರು. 20ನೇ ಶತಮಾನದ ಆರಂಭದಿಂದಲೂ ಈ ಬೆಟ್ಟದ ಮೇಲೆ ಗವಿಪುರದ ಜನತೆ ರಾಮೋತ್ಸವ ಆಚರಿಸುತ್ತಿದ್ದರು.
ಹನುಮಂತಯ್ಯನವರು ರಾಮ ಮತ್ತು ಆಂಜನೇಯರು ಆಲಂಗಿಸಿಕೊಂಡಿರುವ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಿದರು, ಹನುಮಂತ ಇರುವ ಈ ಪ್ರದೇಶಕ್ಕೆ ಹನುಮಂತನಗರ ಎಂದೇ ನಾಮಕರಣ ಮಾಡಿದರು, ರಾಮ ಆಂಜನೇಯರ ಮಿಲನದ ಸಿಮೆಂಟ್ ಪ್ರತಿಮೆಯ ದೇವಾಲಯವಿರುವ ಗುಡ್ಡಕ್ಕೆ ಆನಂದ ಮಿಲನಾದ್ರಿ ಎಂದೂ ಕರೆದರು. ಒಂದೂವರೆ ಅಡಿ ಎತ್ತರದ ಆಂಜನೇಯನಿದ್ದ ಜಾಗದಲ್ಲಿ 18 ಅಡಿ ಎತ್ತರದ ಎದುರು ಮುಖದ ಆಂಜನೇಯನ ಸುಂದರ ಕೃಷ್ಣ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಬೆಟ್ಟದ ಮೇಲೆ ವಿಶಾಲವಾದ ಭವ್ಯ ದೇವಾಲಯ ನಿರ್ಮಾಣ ಮಾಡಿಸಿದರು. ದೇವಾಲಯಕ್ಕೆ ಶ್ರೀನಗರದಿಂದ ಬರುವ ಮಾರ್ಗದಲ್ಲಿ ಹಾಗೂ ಗವಿಪುರದಿಂದ ನೇರವಾಗಿ ಹಾಗೂ ಹಿಂಬದಿಯಲ್ಲಿ ಹನುಮಂತನಗರದಿಂದ ಬರಲು ಮೂರು ಕಡೆ ಮೆಟ್ಟಿಲುಗಳಿವೆ.
ದೇವಾಲಯದ ಗರ್ಭಗುಡಿಯಲ್ಲಿರುವ ಹನುಮಂತನಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಹಳೆಯ ಒಂದೂವರೆ ಅಡಿ ಪ್ರಾಣದೇವರ ಮೂರ್ತಿಯನ್ನೂ ಅಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದು, ಅದಕ್ಕೂನಿತ್ಯ ಪೂಜೆ ಸಲ್ಲುತ್ತದೆ. ಶ್ರೀರಾಮನಮಿ, ಹನುಮಜಯಂತಿ ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರೀರಾಮನವಮಿಯ ಮಾರನೆ ದಿನ ಇಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ. ರಾತ್ರಿಯಿಡೀ ಬಡಾವಣೆಯಲ್ಲಿ ಸಂಚರಿಸುವ ಉತ್ಸವ ಮೂರ್ತಿ ಬೆಳಗ್ಗೆ ದೇವಾಲಯಕ್ಕೆ ವಾಪಸಾಗುತ್ತದೆ.
ದೇವಾಲಯದ ನಿರ್ವಹಣೆಗೆ ಸೇವಾ ಸಮಿತಿ ಇದ್ದು, ದೇವಾಲಯವನ್ನು ಅಭಿವೃದ್ಧಿ ಪಡಿಸುವಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಇಲ್ಲಿ ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಈ ದೇವಾಲಯದ ಎದುರು ತಿಮ್ಮೇಶ ಪ್ರಭು ಉದ್ಯಾನವನವಿದ್ದು, ಇಲ್ಲಿ ಸಂಗೀತ ಕಾರಂಜಿ ಇದೆ. ಪ್ರತಿ ಭಾನುವಾರ ಸಂಜೆ 7ರಿಂದ 8ರವರೆಗೆ ಇಲ್ಲಿ ನೃತ್ಯ ಕಾರಂಜಿಯ ಲಾಸ್ಯ ನೋಡಬಹುದು. ಪ್ರವೇಶ ಉಚಿತ. | |||