ಮುಖಪುಟ /ನಮ್ಮದೇವಾಲಯಗಳು   

ಶರಾವತಿಯ ಉಗಮಸ್ಥಾನ ಅಂಬುತೀರ್ಥ

Ambuteertha, Photo courtesy Govt. websiteಜಗದ್ವಿಖ್ಯಾತ ಜೋಗ ಜಲಪಾತವನ್ನು ಸೃಷ್ಟಿಸುವ ಶರಾವತಿ ಕನ್ನಡನಾಡ ಭಾಗೀರಥಿ ಎಂದೇ ಖ್ಯಾತವಾಗಿದೆ. ಈ ಪವಿತ್ರ ಪುಣ್ಯ ನದಿ ಹುಟ್ಟುವುದು ತೀರ್ಥಹಳ್ಳಿಗೆ 16 ಕಿಮೀ ದೂರದಲ್ಲಿರುವ ಕವಲೇದುರ್ಗದ ಸಮೀಪದ ಅಂಬುತೀರ್ಥದಲ್ಲಿ.

ಶರಾವತಿ ಹುಟ್ಟಿದ ಬಗ್ಗೆ ಹಾಗೂ ಈ ಕ್ಷೇತ್ರಕ್ಕೆ ಅಂಬುತೀರ್ಥ ಎಂಬ ಹೆಸರು ಬಂದ ಬಗ್ಗೆ ಒಂದು ಕಥೆಯಿದೆ. ಅರಣ್ಯವಾಸದಲ್ಲಿದ್ದ ತ್ರೇತಾಯುಗದ ಯುಗಪುರುಷ ಶ್ರೀರಾಮಚಂದ್ರ ಈ ಪ್ರದೇಶಕ್ಕೆ ಬಂದು ನೆಲೆಸಿದ್ದಾಗ, ಸ್ನಾನ ಸಂಧ್ಯಾದಿ ಕಾರ್ಯಗಳಿಗಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಎಂದರೆ ಬಾಣ, ಬಾಣ ಬಿಟ್ಟಾಗ ಉದ್ಭವಿಸಿದ ಈ ತೀರ್ಥ ಅಂಬುತೀರ್ಥವಾಗಿದೆ. ಹೀಗೆ ಉದ್ಭವಿಸಿದ ತೀರ್ಥ ಅಲ್ಲಿಯೇ ಇರುವ ಪುಟ್ಟ ಕೊಳಕ್ಕೆ ಹರಿದು, ಕೆರೆ ಸೇರಿ ನಂತರ ಗುಪ್ತಗಾಮಿನಿಯಾಗಿ ಹರಿದು, ನದಿಯಾಗಿ 128 ಕಿಲೋ ಮೀಟರ್ ಪ್ರವಹಿಸಿ, ಹೊನ್ನಾವರ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಶ್ರೀರಾಮನ ಶರದಿಂದ ಹುಟ್ಟಿದ ನದಿ ಶರಾವತಿ ಎಂಬ ಹೆಸರು ಪಡೆದಿದೆ ಎಂದು ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಿದೆ.

ಶ್ರೀರಾಮಚಂದ್ರ ಇಲ್ಲಿ ಸೀತಾ ಸಮೇತನಾಗಿ ಶಿವನನ್ನು ಪೂಜಿಸಿದನಂತೆ, ಹೀಗಾಗೇ ಶರಾವತಿ ಉಗಮ ಸ್ಥಾನ ಅಂಬುತೀರ್ಥದಲ್ಲಿ ಶಿವದೇವಾಲಯವಿದೆ. ಈ ಶಿವನ ಪಾದದ ಬಳಿಯೇ ನದಿ ಹುಟ್ಟುವುದು ಎಂದು ಪುರೋಹಿತರು ತೋರಿಸುತ್ತಾರೆ. ಇಲ್ಲಿಂದ ನೀರು ಪಕ್ಕದ ಕೊಳಕ್ಕೆ ಹರಿಯುತ್ತದೆ. ನಿತ್ಯವೂ ಇಲ್ಲಿ ಶಿವನಿಗೆ ಹಾಗೂ ಅಂಬುತೀರ್ಥದ ಕುಂಡಿಕೆಗೆ ಪೂಜೆ ನಡೆಯುತ್ತದೆ.

ಅಂಬುತೀರ್ಥಕ್ಕೆ ಹೋಗಲು ತೀರ್ಥಹಳ್ಳಿಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ಬಸ್ ಸೌಕರ್ಯವೂ ಇದೆ. ಅಂಬುತೀರ್ಥದಲ್ಲಿ ಕುಂಡಿಕೆಯ ದರ್ಶನ ಮಾಡಲು ಮುಖ್ಯರಸ್ತೆಯಿಂದ ಒಂದು ಕಿಲೋ ಮೀಟರ್ ನಡೆದೇ ಹೋಗಬೇಕು.

ಧಾರ್ಮಿಕರಿಗೆ ಪುಣ್ಯ ಕ್ಷೇತ್ರವಾದ ಈ ತಾಣ, ಪ್ರವಾಸಿಗರ ಸ್ವರ್ಗವೆನಿಸಿದೆ. ಮಲೆನಾಡ ಮಡಿಲ ಈ ಭಾಗದಲ್ಲಿರುವ ಹಚ್ಚಹಸಿರು, ಪ್ರಕೃತಿಯ ರಮಣೀಯತೆ ಎಂಥಹವರನ್ನೂ ಬೆರಗುಗೊಳಿಸುತ್ತದೆ. 

ಮುಖಪುಟ /ನಮ್ಮದೇವಾಲಯಗಳು