ಮುಖಪುಟ /ನಮ್ಮ ದೇವಾಲಯಗಳು  

ಅಗ್ರಹಾರ ಬೆಳಗುಲಿಯ ಹರಿ-ಹರ ದೇವಾಲಯ

ಒಂದೇ ದೇವಾಲಯದಲ್ಲಿ ಶಿವ ಮತ್ತು ವಿಷ್ಣು ಇರುವುದು ಇಲ್ಲಿಯ ವಿಶೇಷ

.ನಟರಾಜ ಪಂಡಿತ್

Agrahara Belaguli Temple, Hassan, ಅಗ್ರಹಾರ ಬೆಳಗುಲಿ ದೇವಾಲಯಧ್ಯಾನ ಶ್ಲೋಕ

 ಪಾಯಾತ್‌ಕುಮಾರಜನಕಃ ಶಶಿಖಂಡಮೌಲೀ
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ
|
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ
ಆದ್ಯಕ್ಷರೇಣ ಸಹಿತೋ ರಹಿತೋಹಿ ದೇವಃ
||

 ಅಂದಿನ ದಿನಗಳಲ್ಲಿನ ಶೈವ - ವೈಷ್ಣವ ಸಂಘರ್ಷದಿಂದ ಬೇಸತ್ತ ಅನಾಮಧೇಯ ಕವಿಯ ಚಮತ್ಕಾರಿಕ  ಶ್ಲೋಕ ಇದಾಗಿದೆ.

ಅರ್ಥ ವಿವರಣೆ

ಪ್ರತಿ ಅಕ್ಷರದ ಮೊದಲ ಅಕ್ಷರದಿಂದ ಕೂಡಿದರೆ ಶಿವನೂ ಮೊದಲ ಅಕ್ಷರ ಬಿಟ್ಟು ಹೇಳಿದರೆ ವಿಷ್ಣುವೂ ಬರುವ ರೀತಿಯಲ್ಲಿ ಈ ಶ್ಲೋಕ ರಚಿತವಾಗಿದೆ.

ಕುಮಾರ ಜನಕಃ = ಕುಮಾರನ (ಷಣ್ಮುಖನ) ತಂದೆ ಶಿವ
ಮಾರ ಜನಕಃ = ಮನ್ಮಥನ ತಂದೆ ವಿಷ್ಣು
ಶಶಿಖಂಡಮೌಲೀಃ = ತಲೆಯಲ್ಲಿ ಚಂದ್ರನನ್ನು ಧರಿಸಿದವ ಶಿವ
ಶಿಖಂಡ ಮೌಲೀಃ = ನವಿಲು ಗರಿಯನ್ನು ತಲೆಯಲ್ಲಿ ಧರಿಸಿದವ ಕೃಷ್ಣ
ಶಂಖಪ್ರಭಃ = ಶಂಖದಂತೆ ಬೆಳ್ಳಗಿರುವ ಶಿವ
ಖಪ್ರಭಃ= ಆಕಾಶದಂತೆ ನೀಲಿ ಬಣ್ಣದಿಂದ ಇರುವ ಶಿವ
ನಿಧನಃ= ಯಮನಿಗೂ ಒಡೆಯನೆನಿಸಿದ ಶಿವ
ಧನಃ= ಸಂಪತ್ತಿಗೆ ಒಡೆಯನೆನಿಸಿದವ ವಿಷ್ಣು
ಗವೀಶಯನಃ = ವೃಷಭ ವಾಹನನಾದ ಶಿವ
ವೀಶಯಾನಃ = ವೀ ಎಂದರೆ ಪಕ್ಷಿಗಳು. ಅವುಗಳ ಒಡೆಯ ಗರುಡ. ಗರುಡವಾಹನನಾದ ವಿಷ್ಣು
ಗಂಗಾಂ= ಗಂಗೆಯನ್ನು ತಲೆಯಲ್ಲಿ ಧರಿಸಿದ ಶಿವ
ಗಾಂ= ಭೂಮಿಯನ್ನು ಧರಿಸದ ವಿಷ್ಣು (ಕೂರ್ಮಾವತಾರ ಭೂಮಿಯನ್ನು ಮೇಲೆತ್ತಿದವ)
ಪನ್ನಗಧರಃ= ಹಾವನ್ನು ಧರಿಸಿದವ ಶಿವ

ನಗಧರಃ = ಪರ್ವತವನ್ನು ಮೇಲೆತ್ತಿದವ ವಿಷ್ಣು (
ಕೃಷ್ಣಾವತಾರದಲ್ಲಿ ಗೋವರ್ಧನ ಗಿರಿಯನ್ನು ಮೇಲೆತ್ತಿದವ)
ಉಮಾ ವಿಲಾಸಃ= ಪಾರ್ವತಿಯ ಜೊತೆಗಿರುವ ಶಿವ
ಮಾ ವಿಲಾಸಃ= ಲಕ್ಷ್ಮಿಯ ಜೊತೆಗಿರುವ ವಿಷ್ಣು
 ಇಂತಹ ಮೊದಲ ಅಕ್ಷರ ಸಹಿತ/ರಹಿತನಾದ ದೇವನು ನಮ್ಮನ್ನು ಕಾಪಾಡಲಿ.

ದೇವಾಲಯದ ಇತಿಹಾಸ

Agrahara Belaguli Temple, Hassan, ಅಗ್ರಹಾರ ಬೆಳಗುಲಿ ದೇವಾಲಯ, ಶಿವಲಿಂಗಚನ್ನರಾಯಪಟ್ಟಣ ತಾಲೂಕು ಅಗ್ರಹಾರ ಬೆಳಗುಲಿ ಗ್ರಾಮದ ಬೆಟ್ಟೇಶ್ವರ ದೇವಾಲಯ ಕ್ರಿ.ಶ.೧೨೫೩ ರಲ್ಲಿ ಅಂದರೆ ೧೩ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸವಾದ ದ್ವಿ-ಕೂಟಾಚಲ ದೇವಾಲಯ. ಎರಡು ಗೋಪುರವುಳಿಳ ಈ ದೇವಾಲಯದಲ್ಲಿ ಎರಡು ಗರ್ಭಗುಡಿಗಳಿವೆ.

ಶಾಸನಗಳಲ್ಲಿ ವರ್ಣಿತವಾಗಿರುವಂತೆ ಈ ದೇವಾಲಯವನ್ನು ಹೊಯ್ಸಳ ದೊರೆ2ನೇ ವೀರಬಲ್ಲಾಳನ ಮಂತ್ರಿಯಾದ ಕೇಶಿರಾಜನಿಂದ ನಿರ್ಮಿಸಿದ. ಮೂಲ ದೇವರನ್ನು ಕೇಶವೇಶ್ವರ ಎಂತಲೂ ಗ್ರಾಮವನ್ನು ಕೇಶವಾಪುರ ಅಗ್ರಹಾರ ಎಂದು ಉಲ್ಲೇಖಿಸಲಾಗಿದೆ.

ದೇವಾಲಯವು ವಿಸ್ತಾರವಾಗಿದ್ದು, ದಕ್ಷಿಣಾಭಿಮುಖವಾಗಿದೆ - ದೇವಾಲಯವು ವಿಶಾಲವಾದ ಗರ್ಭಗುಡಿ, ನವರಂಗ, ಮುಖಮಂಟಪ ಹೊಂದಿದೆ.

Agrahara Belaguli Temple, Hassan, ಅಗ್ರಹಾರ ಬೆಳಗುಲಿ ದೇವಾಲಯ, ವಿಷ್ಣುದೇವಾಲಯದ ಕಂಬಗಳ ಕೆತ್ತನೆ ಮತ್ತು ಗಮನ ಸೆಳೆಯುತ್ತದೆ. ನವರಂಗದ ಮೇಲ್ಭಾಗದಲ್ಲಿನ ಅಷ್ಟದಿಕ್ಪಾಲಕರ ಕೆತ್ತನೆ ಅಂದಿನ ಕಾಲದ ಶಿಲ್ಪಿಗಳ ಕಲಾ ನೈಪುಣ್ಯತೆ ಬೆರಗುಂಟುಮಾಡುತ್ತದೆ.
ದೇವಾಲಯದ ಒಳ ಭಾಗದಲ್ಲಿ ಸರಸ್ವತಿ, ಬೃಹತ್ ಗಣೇಶ, ಸಪ್ತ ಮಾತೃಕೆಯರು, ಷಣ್ಮುಖ, ಕಾಳಿಯ ವಿಗ್ರಹಗಳ ಕತ್ತನೆ ಗಮನ ಸೆಳೆಯುವಂತಿದೆ. ಅಲ್ಲದೆ ಸರಸ್ವತಿಯ ಕೈಯಲ್ಲಿನ  ಜಪ ಮಾಲೆ ಕೆತ್ತನೆ ಅದ್ಭುತವಾಗಿದೆ. ಕಾಳಿ ವಿಗ್ರಹವು ಆ ಕಾಲದಲ್ಲಿ ಈ ಭಾಗದಲ್ಲಿ ಶಕ್ತಿಯ ಆರಾಧನೆ ಅಸ್ತಿತ್ವದಲ್ಲಿದ್ದುದನ್ನು ಸ್ಪಷ್ಟೀಕರಿಸುತ್ತದೆ.

ದೇವಾಲಯದ ಮುಂದಿನ ವಿಶಾಲವಾದ ಜಗಲಿಯ ಕಟ್ಟೆಗಳು -  ಅಂದಿನ ದಿನಗಳಲ್ಲಿ ದೇವಾಲಯದಲ್ಲಿ ವೈಭವಯುತವಾಗಿ ನಡೆಯುತ್ತಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೀಕ್ಷಿಸಲು ಬರುವವರಿಗೆ ನಿರ್ಮಿಸಿರುವ ಆಸನ ವ್ಯವಸ್ಥೆಯು ಆಗಿರಬಹುದಾಗಿದೆ ಎಂದು ಊಹಿಸಬಹುದಾಗಿದೆ.

ಈ ದೇವಾಲಯದ ಮುಖ್ಯ ವಿಶೇಷತೆಯೆಂದರೆ ಒಂದೇ ದೇವಾಲಯದಲ್ಲಿ ಸುಂದರವಾದ ಶಿವ ಮತ್ತು ವಿಷ್ಣುವಿನ (ಕೇಶವ) ಗರ್ಭಗುಡಿಗಳನ್ನು ಹೊಂದಿರುವುದು ಶೈವ ಮತ್ತು ವೈಷ್ಣವ-ಸಮನ್ವಯ ಸಂಕೇತವಾಗಿದೆ.

Agrahara Belaguli Temple, Hassan, ಅಗ್ರಹಾರ ಬೆಳಗುಲಿ ದೇವಾಲಯ, ಗಣೇಶದೇವಾಲಯದ ಮುಂದಿರುವ ವಿಶಾಲವಾದ ಕೆರೆ ಕೇಶವ ಸಮುದ್ರ ಎಂದೇ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈಶ್ವರನ ಮುಂಭಾಗದ ಬಾಗಿಲಿಗೆ ಹೊಂದಿಕೊಂಡಂತಿರುವ ಮಂಟಪ-ಅದಕ್ಕೆ ಹೊಂದಿಕೊಂಡಂತಿರುವ ಪುಟ್ಟ ಗುಡಿಯಲ್ಲಿನ ನಂದಿಯ (ಬಸವಣ್ಣನ) ವಿಗ್ರಹ ಭಕ್ತಾಧಿಗಳ/ಪ್ರವಾಸಿಗರ ಗಮನ ಸೆಳೆಯುತ್ತದೆ.

ಕಾಲಕಾಲಕ್ಕೆ ಉತ್ತಮ ಮಳೆಯಾಗುತ್ತಿದ್ದು - ಕೆರೆಯು ಜಲ ಸಮೃದ್ಧವಾಗಿರುತ್ತಿದ್ದು - ಆ ದಿನಗಳಲ್ಲಿ ಹುಣ್ಣಿಮೆಯ ಸಂದರ್ಭದಲ್ಲಿ ಚಂದ್ರನಿಂದ ಬಂದಂತಹ ಬೆಳಕು - ಕೆರೆಯ ನೀರಿನಲ್ಲಿ ಪ್ರತಿಫಲನವಾಗಿ ನಂದಿಯ ಹಿಂಭಾಗದ ಕಿಂಡಿಯ ಮೂಲಕ - ಬಸವಣ್ಣ ಕೊಂಬುಗಳ ಮೂಲಕ ಶಿವನನ್ನು ತಲುಪುವ ವ್ಯವಸ್ಥೆ ರೋಮಾಂಚನ ಉಂಟುಮಾಡುತ್ತದೆ.

ಇಷ್ಟೆಲ್ಲಾ ಐತಿಹಾಸಕ ವಿಶೇಷತೆಗಳನ್ನು - ಸಾಂಸ್ಕೃತಿಕ ವೈಭವವನ್ನು ಹೊಂದಿರುವ ಈ ದೇವಾಲಯವನ್ನು ಸಂರಕ್ಷಿಸುವುದು, ಸುಂದರಮಯವಾಗಿಸುವುದು, ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯವಲ್ಲವೇ?

ಮುಖಪುಟ; /ನಮ್ಮ ದೇವಾಲಯಗಳು